ಪಾದರೋಗಗಳು ಮತ್ತು ಊನಗಳು -
ಮಾನವಪಾದಕ್ಕೆ ಸೀಮಿತ ವಾದ ವ್ಯಾಧಿಗಳು ಮತ್ತು ಊನಗಳನ್ನು ಅರ್ಥಮಾಡಿಕೊಳ್ಳಲು ಪಾದದ ಸಹಜ ರಚನೆ ಹಾಗೂ ಕ್ರಿಯೆಗಳ ಸ್ಥೂಲ ಪರಿಚಯ ಅಗತ್ಯ. ಇಪ್ಪತ್ತಾರು ಎಲುಬುಗಳ ಜೋಡಣೆ ಪಾದ. ಇದರ ಆಕಾರ ತೂಗು ಸೇತುವೆಯಂತೆ ಕಮಾನಾಗಿದೆ. ಇದು ಲಂಬವಾಗಿರುವುದಲ್ಲದೆ ಅಡ್ಡವಾಗಿಯೂ ಇದೆ. ರಚನೆ ಹೀಗಿರುವುದರಿಂದ ಪಾದದ ಎಲ್ಲ ಭಾಗಗಳೂ ದೇಹತೂಕವನ್ನು ಸಮವಾಗಿ ಹೊರುವುದಿಲ್ಲ. ಲಂಬಕಮಾನಿನ ಹಿಂತುದಿ ಮುಂತುದಿಗಳು ದೇಹದ ಎಲ್ಲ ತೂಕವನ್ನೂ ಧರಿಸುತ್ತವೆ. ಹಿಂಬದಿಯಲ್ಲಿ ಕ್ಯಾಲ್ಕೇನಿಯಮ್ ಎಂಬ ಎಲುಬೂ ಮುಂಬದಿಯಲ್ಲಿ ಒಂದನೆಯ ಮತ್ತು ಐದನೆಯ ಮೆಟಟಾರ್ಸಲ್ ಎಲುಬುಗಳ ತಲೆಗಳೂ ಒಂದು ತ್ರಿಪಾದ ಅಟ್ಟಣಿಗೆಯಂತಿದ್ದು (ಟ್ರೈಪಾಡ್) ದೇಹಭಾರವೆಲ್ಲ ಇದರ ಮೇಲೆ ಬೀಳುತ್ತದೆ. ಪಾದದ ಕಮಾನುಗಳು ಅಸ್ಥಿಬಂಧಕಗಳಿಂದ ಬಿಗಿಯಲ್ಪಟ್ಟಿರುವುದರಿಂದ ತಮ್ಮ ಸ್ವರೂಪವನ್ನು ಕಾಯ್ದಿರಿಸಿಕೊಳ್ಳಲು ಅನುಕೂಲವಾಗಿದೆ. ಅಲ್ಲದೆ ನೆರೆಯಲ್ಲಿರುವ ಮಾಂಸಖಂಡಗಳೂ ಕಮಾನುಗಳ ಸ್ಥಿರತ್ವಕ್ಕೆ ಸಹಾಯಕವಾಗಿವೆ. ನೆಟ್ಟ ನಿಲುವಿಗೂ ಚಲನೆಗೂ ಪಾದದ ಕಮಾನುಗಳ ಅಸ್ತಿತ್ವ ಬಲುಮುಖ್ಯ. ಕಮಾನಿನಲ್ಲಿ ವ್ಯತ್ಯಾಸವಾದರೆ ಸ್ಥಾಯೀ ಸ್ವಭಾವದ (ಸ್ಟಾಸ್ತ್ಯಿಟಿಕ್) ಉನರೋಗಗಳು ಉಂಟಾಗುತ್ತವೆ. ಊರೆಗೋಲಾಗಿ ದೇಹಭಾರವನ್ನು ಹೊರುವುದಕ್ಕೂ ಚಲನೆಗೂ ಮಾತ್ರವಲ್ಲದೆ ಆ ಭಾಗದ ನರ ರಕ್ತನಾಳಗಳು ದೇಹಭಾರದಿಂದ ಜಜ್ಜಿ ಹೋಗದಂತೆಯೂ ಪಾದದ ಕಮಾನುಗಳು ರಕ್ಷಿಸುತ್ತವೆ.

ಪಾದರೋಗಗಳು : ಅಸ್ಥಿಪಂಜರದ ಎಲ್ಲ ರೋಗಗಳು ಪಾದದಲ್ಲಿರುವ ಎಲುಬುಕೀಲುಗಳಲ್ಲಿ ಬರಬಹುದು. ಇವುಗಳಲ್ಲಿ ಅತಿ ಮುಖ್ಯವಾದವೆಂದರೆ ಟ್ಯಾಲಿಪೆಸ್, ಎಲುಬು ಉರಿಯೂತ (ಅಪ್ಟಿಯೊಮಯಲೈಟಿಸ್), ಎಲುಬು ಕ್ಷಯ, ಪಾದದ ಅಣಬೆ ರೋಗ,  ಪಾದದ ಸಂಧಿವಾತ ರೋಗಗಳು, ಗಾಟಿ ಆಥ್ರೈಟಿಸ್, ಕ್ಯಾಲಕೇನಿಯಲ್ ಸ್ಪರ್, ಮೆಟರ್ಸಾಲ್ಜಿಯ.

ಟ್ಯಾಲಿಪೆಸ್ : ಪಾದದ ಹುಟ್ಟು ವಕ್ರಾಕಾರಗಳಲ್ಲಿ ಇದು ಅತಿಮುಖ್ಯವಾದದ್ದು. ಈ ತರಹೆ ವಕ್ರಾಕಾರ ಜೀವನದಲ್ಲಿ ಅದೃಷ್ಟ ಸಂಕೇತವೆಂದು ಅದನ್ನು ಸರಿಪಡಿಸದೆ ತಿರುಗಾಡುವ ಜನರೆಷ್ಟಿಲ್ಲ! ಕೈಕಾಲುಗಳು ಉತ್ಪತ್ತಿಯಾಗುವ ಮೀಸಂಕೈಮಲ್ ಊತಕದಲ್ಲಿ ಜೀನ್ ಸಂಬಂಧಿದೋಷ ಇದ್ದರೆ ಇಂಥ ವಕ್ರಾಕಾರ ಬರುತ್ತದೆಂದು ಈಗಿರುವ ಭಾವನೆ. ಇದರ ಜೊತೆಗೆ ದೇಹದಲ್ಲಿ ಇನ್ನು ಬೇರೆ ಬೇರೆ ಹುಟ್ಟು ವಕ್ರಾಕಾರಗಳು ಅನೇಕ ಜನರಲ್ಲಿ ಇರುತ್ತವೆ. ಇಂಥವು ಮಗು ಬೆಳೆದ ಹಾಗೆಲ್ಲ ಜಾಸ್ತಿ ಆಗುತ್ತವೆ. ಈ ವಕ್ರಾಕಾರವನ್ನು ಸೊಟ್ಟಪಾದ (ಕ್ಲಬ್ ಫುಟ್) ಎಂದೂ ಕರೆಯುತ್ತಾರೆ. ಏಕೆಂದರೆ ಪಾದ ಒಳತಿರುಗಿ ಬೆರಳುಗಳು ಗುಲ್ಫ ಕೀಲಿನ ಒಳಭಾಗವನ್ನು ಮುಟ್ಟುತ್ತವೆ. ಇದು ಎಲ್ಲ ವಕ್ರಾಕಾರಗಳಂತೆ ಗುಣಪಡಿಸಬಹುದಾದ ಸಾಮಾನ್ಯ ಬೇನೆ. ಇದನ್ನು ಮಗು ಹುಟ್ಟಿದ ದಿನದಿಂದಲೆ ಸರಿಪಡಿಸಿದರೆ ಕೇವಲ ಮೂರು ನಾಲ್ಕು ಸಾರಿ ತಿರುವಿ ಪಟ್ಟಿಕಟ್ಟುವುದರಿಂದ ವಾಸಿ ಆಗುತ್ತದೆ. ಕೆಲವೊಮ್ಮೆ ಬಲುಗಟ್ಟಿ ಆಗಿರುವ ವಕ್ರಾಕಾರವನ್ನು ಹಿಡಿದಿರುವ ರಜ್ಜುಗಳನ್ನು ಉದ್ದಮಾಡಿ ಸರಿಪಡಿಸಬೇಕಾಗುತ್ತದೆ. ಇಂಥ ವಕ್ರಾಕಾರದ ಸಮೇತ ಹೆಚ್ಚು ದಿವಸ ನಡೆದದ್ದಾದರೆ ಪಾದದ ಎಲುಬು ಕೀಲುಗಳಲ್ಲೂ ಬದಲಾವಣೆ ಆಗಿ ಈ ವಕ್ರಾಕಾರವನ್ನು ಶಸ್ತ್ರಚಿಕಿತ್ಸೆಯಿಂದ ಮಾತ್ರ ಸರಿಪಡಿಸಲು ಸಾಧ್ಯವಾದೀತು ಅಷ್ಟೆ.

ಎಲುಬು ಉರಿಯೂತ : ಆಪ್ಟಿಯೊಮಯಲೈಟಿಸ್ ಎಂಬುದು ಪಾದದ ಎಲುಬಿನಲ್ಲಿ ಕಾಣಿಸಿಕೊಳ್ಳುವ ಸೋಂಕುರೋಗ. ಇದು ಚಿಕ್ಕ ಮಕ್ಕಳಿಗೆ ಬರುವುದು ಹೆಚ್ಚು. ಸಣ್ಣಪುಟ್ಟ ಏಟುಗಳಿಂದ ಬರುತ್ತದೆ. ಸ್ಟೆಫಲೋಕಾಕಸ್ ಎಂಬ ಏಕಾಣುಜೀವಿ ಇದರ ಕಾರಣ. ಜ್ವರ, ಪಾದ ನೋವು, ಊತ ಮತ್ತು ಪಾದ ಹುಣ್ಣುಗಳು ತಲೆದೋರಿ ನಡಿಗೆಗೆ ತೊಂದರೆ ಆಗುತ್ತದೆ.

ಎಲುಬು ಮತ್ತು ಕೀಲು ಕ್ಷಯ : ಇದು ಸಾಮಾನ್ಯವಾಗಿ ದೇಹದಲ್ಲಿ ಎಲ್ಲಾದರೂ ಇರುವ ಕ್ಷಯರೋಗದ ತಾವಿನಿಂದ ಹರಡಿ ಪಾದದ ಎಲುಬು ಅಥವಾ ಕೀಲುಗಳಿಗೆ ಬರುತ್ತದೆ. ನಿಧಾನವಾಗಿ ಇದರಿಂದ ನೋವು ಮತ್ತು ಎರಡು ತುದಿಗಳಲ್ಲೂ ಚೂಪಾಗಿರುವ ಒಂದು ಮಾದರಿ ಊತ ಹಾಗೂ ದೀರ್ಘಕಾಲಿಕ ನೋವು ಕಂಡು ಬಂದು ನಡೆಯಲು ತೊಂದರೆ ಆಗುತ್ತದೆ. ಎಕ್ಸ್ ಕಿರಣ ಪರೀಕ್ಷೆ ಮಾಡಿದಾಗ ಈ ಕ್ರಿಮಿಗಳಿಂದ ಎಲುಬು ಎಷ್ಟರಮಟ್ಟಿಗೆ ತಿನ್ನಲ್ಪಟ್ಟು ಕ್ಷಯಿಸಿದೆ ಎಂಬುದು ಕಾಣುತ್ತದೆ. ಈಗಿರುವ ಕ್ಷಯನಿರೋಧಕ ಔಷಧಿಗಳಿಂದ ಈ ರೋಗ ಸಂಪೂರ್ಣವಾಗಿ ಗುಣವಾಗುತ್ತದೆ. 

ಪಾದದ ಅಣಬೆ ರೋಗ (ಮೈಕಾಟಿಕ್ ಫೂಟ್) : ಇದಕ್ಕೆ ಮಧುರೆ ಪಾದ ಎಂದೂ ಹೆಸರುಂಟು. ಮಧುರೆಯಲ್ಲಿ ಈ ರೋಗವನ್ನು ಮೊತ್ತಮೊದಲು ವೈಜ್ಞಾನಿಕವಾಗಿ ವಿವರಿಸಿದುದೇ ಇದರ ಕಾರಣ ಈ ಕಾಯಿಲೆಯ ಕ್ರಿಮಿ ಆಕ್ಟಿನೋಮೈಕೋಸಿಸ್ ಮಧುರೆ. ಇದು ಅಣಬೆ (ಫಂಗಸ್) ಜಾತಿಗೆ ಸೇರಿದ ಏಕಾಣುಜೀವಿ. ಜನಬರಿಗಾಲಲ್ಲಿ ತಿರುಗುವ ಉಷ್ಣವಲಯ ದೇಶದಲ್ಲಿ ಈ ರೋಗ ಜಾಸ್ತಿ. ಮೊದಲು ನೋವಿಲ್ಲದ ಗುಳ್ಳೆಗಳು ಪಾದದ ಅಡಿಯಲ್ಲಿ ಅಥವಾ ಪಾದದ ಮೇಲೆ ಬಂದು ಅವು ಒಡೆದು ರಂಧ್ರಗಳಾಗಿ ಕೀವು ಮತ್ತು ಕ್ರಿಮಿಗಳಿಂದ ಕೂಡಿದ ಗಡ್ಡೆಗಳು ಬರುತ್ತವೆ. ಕೊನೆಗೆ ಪಾದ ಊದಿ ನೋವಾಗುತ್ತದೆ.
ಪಾದದ ಸಂಧಿವಾತ ರೋಗಗಳು (ರ್ಯೂಮಾಟಾಯಿಡ್ ಆಥ್ರೈಟಿಸ್): ಪಾದದ ಈ ರೋಗ ದೇಹದಲ್ಲೆಲ್ಲ ಬರುವ ರೋಗದ ಒಂದು ಭಾಗ. ಪಾದದ ಸಣ್ಣ ಸಣ್ಣ ಕೀಲುಗಳು ಊದಿ ನೋವು ಉಂಟಾಗಿ ನಡೆಯಲು ತೊಂದರೆ ಕೊಡುತ್ತವೆ. ಕ್ರಮೇಣ ಪಾದ ಮತ್ತು ಬೆರಳುಗಳೆಲ್ಲ ಸೊಟ್ಟು ಸೊಟ್ಟಾಗಿ ವಿಕಾರ ಹೊಂದಿ ನಡೆಯಲು ಅಸಾಧ್ಯವಾಗುತ್ತದೆ.

ಗೌಟಿ ಆಥ್ರೈಟಿಸ್ : ಇದು ಪಾದದಲ್ಲಿ ಪ್ರಾರಂಭವಾಗುವ ಒಂದು ಕೀಲು ರೋಗ. ಪ್ಯೂರಿನ್ ಜೀವರಾಸಾಯನಿಕ ಕ್ರಿಯೆಯ ಪರಿವರ್ತನೆಯಲ್ಲಿ ಆಗುವ ತೊಂದರೆಗಳ ಪರಿಣಾಮವಿದು. ಈ ರೋಗ ಸಾಮಾನ್ಯವಾಗಿ ವಯಸ್ಕರಲ್ಲಿ ದೊಡ್ಡ ಬೆರಳಿನ ಅಡಿ ಕೀಲಿನಲ್ಲಿ ಬರುತ್ತದೆ. ಇದರಿಂದ ರಕ್ತದಲ್ಲಿ ಯೂರಿಕ್ ಆಮ್ಲ ಎಂಬ ವಸ್ತು ವೃದ್ಧಿಗೊಂಡು ಪಾದದ ಕೀಲುಗಳ ಸುತ್ತಲೂ ಶೇಖರಗೊಂಡು ಕೀಲು ನೋವು ಉಂಟಾಗುತ್ತದೆ. ಊತ ಮತ್ತು ಅಚಲತೆ ಕೂಡ ತಲೆದೋರಿ ರೋಗಿಗೆ ಬಹಳ ತೊಂದರೆಯಾಗುತ್ತದೆ.

ಕ್ಯಾಲ್‍ಕೇನಿಯಲ್ ಸ್ಪರ್ : ಇದು ಹಿಮ್ಮಡಿಯಲ್ಲಿ ಬರುವ ನೋವು. ಕ್ಯಾಲ್ ಕೇನಿಯಮ್ ಎಲುಬನ್ನು ನೆರೆಮೂಳೆಗಳಿಗೆ ಬಂಧಿಸಿರುವ ಅಸ್ಥಿಬಂಧನದಲ್ಲಿ ಎಲುಬಿನ ತುಣುಕು ಉದ್ಭವಿಸಿ ಅದರ ಮೇಲೆ ಭಾರ ಬಿದ್ದಾಗ ನೋವು ಉಂಟಾಗುತ್ತದೆ. ಇದು ದೇಹದಲ್ಲಿ ಬರುವ ವಾತ (ರ್ಯೂಮಾಟಿಸಮ್) ಖಾಯಿಲೆಗೆ ಸೇರಿದ ಒಂದು ತರಹದ ಖಾಯಿಲೆ. ಎಕ್ಸ್‍ಕಿರಣ ಪರೀಕ್ಷೆ ಮಾಡಿದಾಗ ಕ್ಯಾಲ್‍ಕೇನಿಯಮ್ ಎಲುಬಿನಿಂದ ಮೊನಚಾಗಿ ಹೊರಬರುವ ಎಲುಬಿನ ಭಾಗವನ್ನು ನೋಡಬಹುದು.
ಮೆಟಟಾರ್ಸಾಲೆಜಿಯ : ಇದರಲ್ಲಿ ಪಾದದ ಮುಂಭಾಗದಲ್ಲಿ ಕೆಲವು ವೇಳೆ ದೀರ್ಘಕಾಲಿಕವಾಗಿ ನೋವು ಕಾಣಬಹುದು. ಒಂದನೆಯ ಮೆಟಟಾರ್ಸಲ್ಲಿನ ತಲೆ ತುಂಡಾಗಿದ್ದರೆ ದೇಹದ ಭಾರ ಬೇರೆ ಮೆಟಟಾರ್ಸಲ್ಲಿನ ಮೇಲೆ ಬೀಳುವುದರಿಂದ ಪಾದದ ಮುಂಭಾಗ ನೋವಾಗಬಹುದು. ಕೆಲವು ವೇಳೆ ಬೆರಳುಗಳ ಬುಡದ ಕೀಲುಗಳು ರೋಗಗ್ರಸ್ತವಾಗಿ ನೋವು ಉಂಟಾಗಬಹುದು. ಹೀಗಾಗಿ ಇಂಥ ನೋವಿನ ಕಾರಣ ಅರಿತು ಚಿಕಿತ್ಸೆ ಮಾಡಬೇಕು. ಪಾದರಕ್ಷೆಯಲ್ಲಿ ಕೆಲವು ಬದಲಾವಣೆ ಮಾಡಿ ಈ ನೋವನ್ನು ಗುಣಪಡಿಸುವುದು ಸಾಧ್ಯ.

ಪಾದ ಊನಗಳು : ಇವು ಪ್ರತ್ಯಕ್ಷ ಅಥವಾ ಪರೋಕ್ಷ ಏಟುಗಳಿಂದ ಉಂಟಾಗುತ್ತವೆ. ಇವುಗಳ ಪೈಕಿ ಪಾದಚಾರಿ ತಿರುಗುವುದೇ ಮುಖ್ಯ ಊನ. ಪಾದ ಊನಗಳನ್ನು ಕೀಲು ಉಳುಕು, ಅಸ್ಥಿ ಛಿದ್ರತೆ, ಕೀಲು ಭೇದನೆ ಎಂಬ ಮೂರು ಗುಂಪುಗಳಾಗಿ ವಿಂಗಡಿಸಬಹುದು.

ಉಳುಕು ಎಂದರೆ ಪಾದದ ಕೀಲುಗಳ ಅಸ್ಥಿಬಂಧನಗಳು ಅರ್ಧ ಅಥವಾ ಪೂರ್ಣವಾಗಿ ಹರಿದಿರುವುದು. ಇದರಲ್ಲಿ ಗುಲ್ಫಕೀಲಿನ ಹೊರಭಾಗದ ಅಸ್ಥಿಬಂಧನ ಸಾಮಾನ್ಯವಾಗಿ ಹರಿಯುತ್ತದೆ. ಮೂರು ನಾಲ್ಕು ವಾರ ಪ್ಲಾಸ್ಟರ್ ಪಟ್ಟಿಕಟ್ಟಿ ಪಾದದ ಚಲನೆಯನ್ನು ನಿರ್ಬಂಧಿಸಿ ಇವೆಲ್ಲವನ್ನೂ ಗುಣಪಡಿಸಬಹುದು.

ಅಸ್ಥಿಛಿದ್ರತೆಗಳು ಸಾಮಾನ್ಯವಾಗಿ ವ್ಯಕ್ತಿ ಮೇಲಿನಿಂದ ಬೀಳುವುದರಿಂದ ಉಂಟಾಗುತ್ತವೆ. ಇವುಗಳ ಪೈಕಿ ಕ್ಯಾಲ್ಕೇನಿಯಮ್ ಮತ್ತು ಐದನೆಯ ಮೆಟಟಾರ್ಸಲ್ ಬುಡದ ಅಸ್ಥಿಛಿದ್ರತೆ ಬಹಳ ಜಾಸ್ತಿ. ಪಾದದ ಯಾವುದೇ ಎಲುಬು ಅಥವಾ ಎಲ್ಲ ಎಲುಬುಗಳೂ ಛಿದ್ರವಾಗಬಹುದು. ಅಸ್ಥಿಛಿದ್ರವಾದರೆ ಪಾದದಲ್ಲಿ ನೋವು, ಊತ ಬಂದು ನಡೆಯಲು ಸಾಧ್ಯವಾಗುವುದಿಲ್ಲ. ಎಕ್ಸ್‍ಕಿರಣ ಪರೀಕ್ಷೆ ಮಾಡಿದರೆ ಅಸ್ಥಿ ಛಿದ್ರತೆ ಮತ್ತು ಅದರ ಸ್ಥಾನ ಪಲ್ಲಟವನ್ನು ಗುರುತಿಸಬಹುದು. ಈ ಅಸ್ಥಿಛಿದ್ರತೆಗಳ ಜೊತೆಗೆ ಪಾದದ ಕೀಲುಗಳು ಅವ್ಯವಸ್ಥೆಗೊಳ್ಳಬಹುದು. ಇವನ್ನು ಮತ್ತು ಬರಿಸಿ ಸರಿಯಾಗಿ ಕೂಡಿಸಿ ಪ್ಲಾಸ್ಟರ್ ಪಟ್ಟಿಗಳಿಂದ ನಾಲ್ಕರಿಂದ ಆರು ವಾರಗಳ ತನಕ ಪಾದಚಲನೆ ಸಾಧ್ಯವಿಲ್ಲದಂತೆ ಬಂಧಿಸಿ ಚಿಕಿತ್ಸಿಸಬೇಕು.

ಕೀಲುಭೇದನೆಗಳಲ್ಲಿ ಗುಲ್ಫ ಕೀಲು ಮತ್ತು ಮೆಟಟಾರ್ಸಲ್ಲುಗಳ ಬುಡಕೀಲುಗಳ ಹೊರಳುವಿಕೆ ಸಾಮಾನ್ಯ. ಇವು ಹೊರಗಿನಿಂದ ತಗಲುವ ಏಟುಗಳಿಂದ ಆಗುತ್ತವೆ. ಕೀಲು ಹೊರಳುವಿಕೆ ಕೆಲವು ವೇಳೆ ಅಸ್ಥಿಛಿದ್ರತೆಗಳೊಡನೆಯೇ ಆಗುತ್ತದೆ. ಹೊರಳಿದ ಕೀಲಿನಲ್ಲಿ ವಿಪರೀತ ನೋವಾಗಿ ಸ್ವಲ್ಪ ಹೊತ್ತಿನಲ್ಲಿ ಊತ ಬಂದು ಆ ಕೀಲಿನ ಚಲನೆ ನಿಲ್ಲುತ್ತದೆ. ಎಕ್ಸ್‍ಕಿರಣ ಪರೀಕ್ಷೆಯಿಂದ ಕೀಲು ಹೊರಳಿರುವುದನ್ನು ಗೊತ್ತುಪಡಿಸುವುದು ಸುಲಭ. ಹೊರಳಿದ ಕೀಲುಗಳನ್ನು ಜಾಗ್ರತೆ ಕೂಡಿಸಿ ಚಲನೆ ಇಲ್ಲದಂತೆ ಕಟ್ಟಬೇಕು.
ಪಾದಸ್ಥಾಯಿ ಸ್ವಭಾವಖಾಯಿಲೆಗಳು : ಪಾದದ ಆಕಾರ ವ್ಯತ್ಯಾಸದಿಂದ ಮತ್ತು ಅದು ಹೊರುವ ಭಾರದಿಂದಲೇ ಬರುವ ಕೆಲವು ಖಾಯಿಲೆಗಳು ಪಾದದ ವೈಶಿಷ್ಟ್ಯ. ಉದಾಹರಣೆಗೆ ತಟ್ಟೆಪಾದ (ಫ್ಲ್ಯಾಟ್ ಫುಟ್), ಸೊಟ್ಟ ಹೆಬ್ಬೆರಳು (ಹ್ಯಾಲಕ್ಸ್ ವಾಲ್ಗಸ್) ಇತ್ಯಾದಿ.

ತಟ್ಟೆಪಾದದಲ್ಲಿ ಪಾದದ ಕಮಾನುಗಳು ಇರುವುದಿಲ್ಲ. ಪಾದದ ಎಲ್ಲ ಭಾಗಗಳ ಮೇಲೂ ದೇಹದ ಭಾರ ಬೀಳುತ್ತದೆ. ಭಾರ ಹೊರಲು ಶಕ್ಯವಿಲ್ಲದ ಕೆಲವು ಭಾಗಗಳು ಹಿಗ್ಗಿ ನೋವು ಉಂಟಾಗುತ್ತದೆ. ಅಲ್ಲದೆ ಕಮಾನುಗಳಿಲ್ಲದ ಪಾದ ಉಳ್ಳವರು ವೇಗವಾಗಿ ನಡೆಯಲಾರರು.

ಎತ್ತರ ಪಾದವೆಂಬ ವಿಕಾರತೆ ವಿರಳ. ಇದರಲ್ಲಿ ಪಾದದ ಕಮಾನುಗಳ ಎತ್ತರ ಜಾಸ್ತಿ. ದೇಹದ ಭಾರವೆಲ್ಲ ಕೇವಲ ಬಲು ಚಿಕ್ಕ ವಿಸ್ತರಣದಲ್ಲೇ ಬೀಳುವುದರಿಂದ ಆ ಜಾಗಗಳಲ್ಲಿ ಚರ್ಮ ದಪ್ಪವಾಗಿ ನೋವು ಉಂಟಾಗುತ್ತದೆ.

ಸೊಟ್ಟ ಹೆಬ್ಬೆರಳು ಹ್ಯಾಲಕ್ಸ್ ವಾಲ್ಗಸ್ ಎಂದರೆ ಹೆಬ್ಬೆರಳು ಒಳಭಾಗಕ್ಕೆ ತಿರುಗಿರುವುದು.  ಇದು ಕೆಲವೊಮ್ಮೆ ಹೆಚ್ಚಾಗಿ ಪಾದಕ್ಕೆ ಪಾದರಕ್ಷೆಗಳನ್ನು ಹಾಕಲು ತೊಂದರೆ ಆಗಿ ನೋವು ಉಂಟಾಗುತ್ತದೆ.

ಪಾದವೈದ್ಯ : ಇದು ಪಾದದಲ್ಲಿಯ ಆಣಿಗಳನ್ನು ಗುಣಪಡಿಸುವ ವೈದ್ಯ. ಅಂಗಾಲಿನ ಚರ್ಮ ಅಲ್ಲಲ್ಲಿ ದಪ್ಪವಾಗಿ ಗಂಟಿನಂತೆ ಕಂಡುಬರುವಿಕೆಗೆ ಕಾಲಿನ ಆಣಿಗಳೆಂದು ಹೆಸರು. ಅಂಗಾಲಿನ ಚರ್ಮದಲ್ಲಿರುವ ಜೀವಂತ ಹೊರಕೋಶಗಳು (ಎಪಿತೀಲಿಯಲ್ ಸೆಲ್ಸ್) ಒಣಗಿ ಒಂದೊಂದು ಜಾಗದಲ್ಲಿ ಒಳಹೊಕ್ಕು ಗಂಟಿನಂತಾಗುವುದರಿಂದ ಆಣಿಗಳು ಉಂಟಾಗುತ್ತವೆ. ಈ ಒಣ ಕೋಶಗಂಟುಗಳಿಂದ (ಎಪಿತೀಲಿಯ ಪ್ಲಗ್ಸ್) ಇವುಗಳ ಮೇಲಿರುವ ನರಗಳಲ್ಲಿ ಒತ್ತಡ ಉಂಟಾಗಿ ವಿಪರೀತ ನೋವಾಗುತ್ತವೆ. ಆಣಿಗಳು ಸಾಮಾನ್ಯವಾಗಿ ದೇಹದ ಭಾರ ಬೀಳುವ ಎಲುಬಿನ ಮೇಲೆ ಬರುತ್ತವೆ. ಸರಿಯಿಲ್ಲದ ಪಾದರಕ್ಷೆಗಳನ್ನು ತೊಡುವುದರಿಂದಲೂ ಕೆಲವೊಮ್ಮೆ ಇವು ಬೆಳೆಯುವುದುಂಟು. ದಿನಂಪ್ರತಿ ಕಾಲುಬೂಟುಗಳನ್ನು ತೊಡುವುದರಲ್ಲಿ ಚಿಕ್ಕ ಬೆರಳಿನ ಹೊರಗಡೆ ಆಣಿ ಬೆಳೆಯುವುದು ಸರ್ವಸಾಮಾನ್ಯ. ಮೃದುವಾದ ಆಣಿಗಳು ಬೆವರಿನಿಂದ ಒಮ್ಮೊಮ್ಮೆ ಅಣುಜೀವಿಗಳ ಸೋಂಕು ಜಾಡ್ಯಕ್ಕೆ ತುತ್ತಾಗಿ ಹೆಚ್ಚಿನ ನೋವು ಉಂಟುಮಾಡುತ್ತವೆ. ಆಣಿಗಳನ್ನು ತಡೆಗಟ್ಟಲು ಸರಿಯಾದ ಪಾದರಕ್ಷೆ ತೊಡುವುದು ಮತ್ತು ಪಾದದ ಸ್ಥಾಯೀವಕ್ರಗಳನ್ನು ಸರಿಪಡಿಸುವುದು ಮುಖ್ಯ. ಇದರಿಂದ ಪಾದದ ಎಲ್ಲ ಭಾಗಗಳ ಮೇಲೆಯೂ ಭಾರ ಸರಿಯಾಗಿ ಹರಡಿ ಆಣೆ ಬೆಳೆಯುವುದಿಲ್ಲ. ಬೆರಳಿನ ಉಗುರುಗಳನ್ನು ಕತ್ತರಿಸಿ ಸರಿಯಾದ ಆಕಾರ ಮತ್ತು ಆರೋಗ್ಯವಾಗಿ ಇಡುವುದು ಅಗತ್ಯ. ಕೆಲವೊಮ್ಮೆ ಅವು ಬೆರಳಿನ ಮಾಂಸದೊಳಕ್ಕೆ ಕೊರೆದು ನೋವು ಉಂಟುಮಾಡುತ್ತವೆ. ಇವಕ್ಕೆ ಒಳಕ್ಕೆ ಬೆಳೆಯುವ ಉಗುರುಗಳು ಎಂದು ಹೆಸರು. ಈ ಸ್ಥಳಕ್ಕೆ ಸೋಂಕು ತಗುಲಿದರೆ ಬೆರಳು ಊದಿ ವಿಪರೀತ ನೋವಾಗುತ್ತದೆ. 
(ವಿ.ಎಚ್.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ